ಯಯಾತಿ
ಸೋಮವಂಶದ ಪ್ರಖ್ಯಾತ ರಾಜ. ತಂದೆ ನಹುಷ ಚಕ್ರವರ್ತಿ, ತಾಯಿ ವಿರಜೆ. ಇವನೊಡನೆ ಹುಟ್ಟಿದವರು : ಯತಿ, ಸಂಯತಿ, ಉದ್ಭವ, ಪಾಚಿ, ಶರ್ಯಾತಿ ಮತ್ತು ಮೇಘಜಾತಿ. 

	ಒಮ್ಮೆ ಯಯಾತಿ ಬೇಟೆಯ ವಿನೋದದಿಂದ ರಥದಲ್ಲಿ ಕಾಡಿನಲ್ಲಿ ಬರುತ್ತಿದ್ದ. ಆಗ ಒಂದು ಪಾಳು ಬಾವಿಯಲ್ಲಿ ಸರ್ವಲಕ್ಷಣ ಸಂಪನ್ನೆಯಾದ ದೇವಕನ್ಯೆ (ದೈತ್ಯರ ಗುರು ಶುಕ್ರಾಚಾರ್ಯರ ಮಗಳು) ದೇವಯಾನಿಯನ್ನು ಕಂಡು, ಆ ಪಾಳು ಕೂಪದಿಂದ ಅವಳ ಕೈಹಿಡಿದು ಮೇಲೆತ್ತಿದ. ಮುಂದೆ ಅವಳೇ ಪಟ್ಟದರಸಿಯಾದಳು. ಅವಳ ಜೊತೆಯಲ್ಲಿಯೇ ವೃಷಪರ್ವ ರಾಜನ ಮಗಳಾದ ಶರ್ಮಿಷ್ಠೆಯು ಬರುತ್ತಾಳೆ. 

	ಯಯಾತಿಗೆ ದೇವಯಾನಿಯಲ್ಲಿ ಯದು ಮತ್ತು ತುರ್ವಸು ಎಂಬುವವರು. ಶರ್ಮಿಷ್ಠೆಯಲ್ಲಿ ಅನು, ದ್ರುಹ್ಯು, ಪೂರು ಎಂಬ ಮೂವರು ಗಂಡು ಮಕ್ಕಳು ಮಾಧವಿ ಎಂಬ ಪುತ್ರಿ ಇರುತ್ತಾರೆ. 

	ಸತ್ಯ, ಧರ್ಮ, ಪರಾಕ್ರಮದಿಂದ ಯಯಾತಿ ರಾಜ್ಯವಾಳಿದ. ಶಾಸ್ತ್ರೋಕ್ತವಾಗಿ ಯಜ್ಞ ಯಾಗಾದಿಗಳನ್ನು ನಡೆಸಿದ. ಶತ್ರುಗಳಿಗೆ ಸೋಲದೆ ಪ್ರಜಾಹಿತ ದೃಷ್ಟಿಯಿಂದ ಬಹುಕಾಲ ರಾಜ್ಯವಾಳಿದ. ಅನೇಕ ಬಗೆಯ ದಾನ ಧರ್ಮಗಳನ್ನು ಮಾಡಿದ. ಬ್ರಾಹ್ಮಣರಿಗೆ ಸಹಸ್ರ ಸಹಸ್ರ ಗೋವುಗಳನ್ನು ದಾನವಾಗಿ ನೀಡಿದ. ಯಜ್ಞಾದಿಗಳಿಂದ ಸರ್ವಸಂಪತ್ತನ್ನೂ ದಾನಮಾಡಿದ ಯಯಾತಿ ಒಮ್ಮೆ ಯಾಚಕನಾಗಿ ಬಂದ ಗಾಲವ ಮುನಿಗೆ ಕೊಡಲು ಏನೂ ಇಲ್ಲದಿದ್ದಾಗ ತನ್ನ ಪ್ರೀತಿಯ ಮಗಳಾದ ಮಾಧವಿಯನ್ನೇ ದಾನವಾಗಿ ಕೊಟ್ಟ. 

	ಇವನ ಕೀರ್ತಿಯನ್ನು ನೋಡಿ ಇಂದ್ರ ಮಹಾರಥವನ್ನು, ವೇಗವಾಗಿ ಓಡುವ ಬಿಳಿಯ ಜಾತಿ ಕುದುರೆಗಳನ್ನು, ಸುವರ್ಣದ ಭುಜ ಕೀರ್ತಿಯನ್ನು ಮೆಚ್ಚುಗೆಯಾಗಿ ಕೊಟ್ಟ. 

	ಇಂದ್ರಿಯ ಸುಖಲೋಲುಪನಾದ ಯಯಾತಿ ವಿಶ್ವಾಚಿ ಎಂಬ ಅಪ್ಸರೆಯೊಡನೆ ಅನೇಕ ವರ್ಷಗಳ ಕಾಲ ಚೈತ್ರರಥದಲ್ಲಿ ವಿಹರಿಸಿದ. ದೀರ್ಘಸತ್ರವೆಂಬ ಯಾಗವನ್ನು ಬಹುಕಾಲ ಮಾಡಿದ್ದರಿಂದಲೂ ದೈತ್ಯರ ಗುರುವಾದ ಶುಕ್ರಾಚಾರ್ಯರ ಶಾಪದಿಂದಲೂ ಭಯಂಕರವಾದ ಮುಪ್ಪು ಈತನನ್ನು ಅಡರಿತು. ಎಲ್ಲ ಸೌಂದರ್ಯವೂ ನಾಶವಾಗಿ ವಿಷಯೋಪಭೋಗದಿಂದ ತೃಪ್ತನಾಗದೆ ಬಹಳ ಸಂಕಟಪಟ್ಟ. ತನ್ನ ಐವರು ಮಕ್ಕಳಲ್ಲೂ ಯೌವನವನ್ನು ಯಾಚಿಸಿದ. ಯಾರೂ ಒಪ್ಪದಿದ್ದಾಗ ಕೋಪದಿಂದ ಮಕ್ಕಳನ್ನು ಶಪಿಸಿದ. ಶರ್ಮಿಷ್ಠೆಯ ಕೊನೆಯ ಪುತ್ರನಾದ `ಪೂರು ಇವನ ಮುಪ್ಪನ್ನು ಪಡೆದು ಯೌವನವನ್ನು ನೀಡಿದ. ಸಾವಿರ ವರ್ಷಗಳು ನಿರಂತರ ತೃಪ್ತಿ ಪಡೆದು ಯೌವನವನ್ನು ಮರಳಿ ಪೂರುವಿಗೆ ಕೊಟ್ಟು ತಾನು ತನ್ನ ವೃದ್ಧಾಪ್ಯ ಅಪ್ಪಿದ. 

	`ನಾನು ಪುತ್ರವಂತನೆನಿಸಿಕೊಂಡಿದ್ದು ನಿನ್ನಿಂದಲೇ. ನೀನೇ ವಂಶವನ್ನು ಮುನ್ನಡೆಸು. ನಿನ್ನಿಂದಲೇ ಪೂರುವಂಶ ಎಂಬ ಹೆಸರು ಬರಲಿ ಎಂದು ಹರಸಿದ. ಪೂರುವಿಗೆ ರಾಜ್ಯಾಭಿಷೇಕವನ್ನು ಮಾಡಿ ತಾನು ವಾನಪ್ರಸ್ಥವನ್ನು ಸ್ವೀಕರಿಸಿದ. 

	ಕಾಡಿನಲ್ಲಿ ಕಠಿಣ ತಪಸ್ಸು ಮಾಡಿ ನಿರಶನವ್ರತವನ್ನು ಅಚರಿಸಿ ಭೃಗುತುಂಗವೆಂಬ ಕ್ಷೇತ್ರದಲ್ಲಿ ದೇಹವನ್ನು ಬಿಟ್ಟು ಪತ್ನಿಯೊಡನೆ ಸ್ವರ್ಗ ಸೇರಿದ. ಸ್ವರ್ಗದಲ್ಲಿ ದೇವ, ಮನುಷ್ಯ, ಗಂಧರ್ವ, ಮಹರ್ಷಿಗಣಗಳಲ್ಲಿ ಯಾರೂ ತನ್ನಷ್ಟು ತಪಸ್ಸು ಅಚರಿಸಿಲ್ಲ ಎಂಬ ಅಹಂಕಾರವೇ ಮತ್ತೆ ಯಯಾತಿಯನ್ನು ಭೂಲೋಕಕ್ಕೆ ಬರುವಂತೆ ಮಾಡಿತು. ಧರ್ಮವಿಧಾನ ತತ್ವಜ್ಞಾನಿಯಾದ ಅಷ್ಟಕ ಮುನಿಯೊಡನೆ ಧರ್ಮ ಸಂಭಾಷಣೆ ನಡೆಸಿ ಪುಣ್ಯಬಲದಿಂದ ಪುನಃ ಸ್ವರ್ಗವೇರಿದ. 
(ವಿ.ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ